ಕಾಲಿಬಂಗನ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವಾಯುವ್ಯ ರಾಜಸ್ಥಾನದಲ್ಲಿ ಶ್ರೀಗಂಗಾನಗರ ಜಿಲ್ಲೆಯಲ್ಲಿ ಫಗ್ಗರ್ ನದಿಯ ಎಡದಂಡೆಯ ಮೇಲಿರುವ ಒಂದು ಗ್ರಾಮ. ಇಲ್ಲಿರುವ ಪುರಾತನ ಅವಶೇಷಗಳಿಂದ ಪ್ರಸಿದ್ಧವಾಗಿದೆ. ಇದು ಸುಪ್ರಸಿದ್ಧ ಪ್ರಾಕ್ತನ ನೆಲೆ. ಹರಪ್ಪದ ಆಗ್ನೇಯ ದಿಕ್ಕಿನಲ್ಲಿ 120 ಮೈಲಿಗಳ ದೂರದಲ್ಲಿದೆ. ಫಗ್ಗರ್ ವೇದಕಾಲದಲ್ಲಿ ಪವಿತ್ರವೆಂದೆಣಿಸಿದ್ದ ಸರಸ್ವತಿ ನದಿಯೇ ಇರಬಹುದೆಂಬುದು ವಿದ್ವಾಂಸರ ಊಹೆ. ಈಗ ಈ ಪ್ರದೇಶ ಥಾರ್ ಮರುಭೂಮಿಯ ಭಾಗವಾಗಿದೆ. ನದಿಯಲ್ಲಿ ಎಂದೋ ಅಪರೂಪವಾಗಿ ಮಾತ್ರ ನೀರು ಬರುತ್ತದೆ. 1961-62ರಲ್ಲಿ ಭಾರತ ಸರ್ಕಾರದ ಪುರಾತತ್ವ ಇಲಾಖೆ ಇಲ್ಲಿಯ ಪ್ರಾಚೀನ ನೆಲೆಯಲ್ಲಿ ನಡೆನಿದ ಉತ್ಖನನದಿಂದಾಗಿ ಹರಪ್ಪ ನಾಗರೀಕತೆಯ, ಅದಕ್ಕೂ ಮೊದಲಿನ ಮತ್ತೊಂದು ಸಂಸ್ಕøತಿಯ ಅವಶೇಷಗಳು ಗೋಚರವಾಗಿವೆ. 

ಇಲ್ಲಿಯ ಪ್ರಾಗ್‍ಹರಪ್ಪ ಸಂಸ್ಕøತಿಯ ನೆಲೆಯ ವಿಸ್ತೀರ್ಣ 28್ಠ0180 ಚ.ಮೀ. ಇದರ ಸುತ್ತಲೂ ಕೋಟೆಗೋಡೆಗಳಿದ್ದುವು. ಒಳಗಿದ್ದ ಮನೆಗಳೆಲ್ಲ ಹಸಿ ಇಟ್ಟಿಗೆಯವು. ಇಲ್ಲಿಯ ಇಟ್ಟಿಗೆಗಳೂ ಕಟ್ಟಡಗಳ ರಚಾನಾವಿನ್ಯಾಸವೂ ಹರಪ್ಪ ಸಂಸ್ಕತಿಯಲ್ಲಿ ಕಂಡು ಬಂದಿರುವದಕ್ಕಿಂತ ಬೇರೆ ರೀತಿಯವು. ಆ ಕಾಲದಲ್ಲಿ ಬಳಕೆಯಲ್ಲಿದ್ದ ಮಣ್ಣಿನ ಪಾತ್ರೆಗಳು ಕೂಡ ಹರಪ್ಪದವಕ್ಕಿಂತ ಭಿನ್ನ ಪ್ರಕಾರದವಾಗಿದ್ದುವು. ಇವು ಈ ಎರಡು ಸಂಸ್ಕøತಿಗಳ ಭೇಧವನ್ನು ಸ್ಪಷ್ಟಗೊಳಿಸುತ್ತೆವೆ. ಆದರೆ ಈ ಸಂಸ್ಕತಿಯ ಸರ್ತಗಳಲ್ಲಿ ದೊರಕಿರುವ ಅಗೇಟ್, ಚಾಲ್ಸೆಡನಿ ಮುಂತಾದ ಕಲ್ಲುಗಳ ಚಿಕ್ಕ ತೆಳು ಚಕ್ಕೆಯ ಚಾಕುಗಳು, ಶಂಖದ ಬಳೆಗಳು, ಸುಟ್ಟ ಮಣ್ಣಿನ ಆಟದ ಗಾಡಿಯ ಚಕ್ರಗಳು, ಗೂಳಿಯ ಬೊಂಬೆಗಳು ಮತ್ತು ಬಳೆಗಳು, ತಾಮ್ರದ ಕೊಡಲಿಗಳು ಮತ್ತು ಬಳೆಗಳು, ಇಲ್ಲಿಯ ವಾಸ್ತುಕಲೆ-ಇವುಗಳಿಂದಾಗಿ ಈ ಸಂಸ್ಕøತಿ ಹರಪ್ಪ ಸಂಸ್ಕøತಿಗೆ ಹತ್ತಿರವಾಗಿತ್ತೆಂದು ತೋರುತ್ತದೆ. ಕ್ರಿ. ಪೂ. ಸು 2500 ಪ್ರಾರಂಭವಾದ ಈ ಸಂಸ್ಕøತಿ ಕ್ರಿ. ಪೂ. 2300ರ ಸುಮಾರಿನಲ್ಲಿ ಪ್ರಾಯಶಃ ಭೂಕಂಪದಿಂದ ಕೊನೆಗೊಂಡಿತು.

 ಅನತಿಕಾಲದಲ್ಲಿ ಹರಪ್ಪ ಸಂಸ್ಕøತಿಯ ಜನರು ಇದೇ ಪ್ರದೇಶದಲ್ಲಿ ನೆಲೆಸಿದರು. ಹರಪ್ಪ ಸಂಸ್ಕøತಿಯ ಪಟ್ಟಣದಲ್ಲಿ ಎರಡು ಭಾಗಗಳಿದ್ದುವು. ಪಶ್ಚಿಮದಲ್ಲಿ ಕೋಟೆ ಮತ್ತು ಅದರಿಂದ 40 ಮೀ. ಪೂರ್ವಕ್ಕೆ ಕೆಳಪಟ್ಟಣ. ಕೋಟೆ ಹಿಂದಿನ ಪ್ರಾಗ್ ಹರಪ್ಪ ಸಂಸ್ಕøತಿಯ ಅವಶೇಷಗಳಿದ್ದ ದಿಬ್ಬದ ಮೇಲೆ ಎತ್ತರದಲ್ಲಿತ್ತು. ವಿನ್ಯಾಸದಲ್ಲಿ ಸಮಾಂತರಚತುರ್ಭುಜವಾಗಿದ್ದ (ಪ್ಯಾರಲೆಲೋಗ್ರಾಮ್) ಕೋಟೆಗೋಡೆ 3-7 ಮೀ. ದಪ್ಪವಾಗಿತ್ತು.  ಅದರಲ್ಲಿ ಅಲ್ಲಲ್ಲಿ ಚೌಕಾಕಾರದ ಬುರುಜುಗಳೂ ಉತ್ತರ ಮತ್ತ ದಕ್ಷಿಣಭಾಗಗಳಲ್ಲಿ ದ್ವಾರಗಳೂಇದ್ದುವು. ಒಳಪ್ರದೇಶ ಪೂರ್ವ-ಪಶ್ಚಿಮವಾಗಿ ಹಬ್ಬಿದ ಗೋಡೆಯೊಂದರಿಂದ ಸುಮಾರು ಸಮವಿಸ್ತೀರ್ಣದ ವಜ್ರಾಕಾರದ (ರಾಂಬಾಯಿಡ್) ಎರಡು ಭಾಗಗಳಲ್ಲಿ ವಿಭಾಗವಾಗಿತ್ತು. ದಕ್ಷಿಣಭಾಗದಲ್ಲಿ ಇಟ್ಟಿಗೆಯಲ್ಲಿ ಕಟ್ಟಿದ ಆರು ಕಟ್ಟೆಗಳಿವೆ. ಒಂದು ಕಟ್ಟೆಯ ಮೇಲೆ ಬಾವಿ, ಅಗ್ನಿಕುಂಡ ಮತ್ತು ಇಟ್ಟಿಗಿಯ ಗೋಡೆಯುಳ್ಳ ತೊಟ್ಟಿ,  ತೊಟ್ಟಿಯೊಳಗೆ ದನದ ಮೂಳೆ ಮತ್ತು ಜಿಂಕೆಯ ಕೊಂಬುಗಳಿದ್ದುವು. ಇನ್ನೊಂದು ಕಟ್ಟೆಯ ಮೇಲೆ ಸಾಲಾಗಿ ಆಯ ಅಥವಾ ಅಂಡಾಕಾರದ ಏಳು ಅಗ್ನಿಕುಂಡಗಳಲ್ಲಿ ಬೂದಿ ಇದ್ದಲು ಮತ್ತು ವೃತ್ತಾಕಾರದ ಮಣ್ಣಿನ ಫಲಕಗಳು ದೊರೆಕಿವೆ. ಈ ಕುಂಡಗಳು ಪ್ರಾಯಶಃ ಯಾವುದೋ ಧಾರ್ಮಿಕ ಆಚರಣೆಗೆ ಸಂಬಂಧಿಸಿರಬೇಕೆಂದೂ ಇಲ್ಲಿ ಸಿಕ್ಕಿರುವ ಪ್ರಾಣಿಗಳ ಅವಶೇಷಗಳು ಯಜ್ಞಗಳಲ್ಲಿ ಬಲಿಯಾದ ಪ್ರಾಣಿಗಳವೆಂದೂ ಊಹಿಸಲಾಗಿದೆ. ಇದೇ ರೀತಿಯ ಕುಂಡಗಳು ಕೆಳನಗರದ ಅನೇಕ ಮನೆಗಳಲ್ಲಿ ಅವಕೇ ಮೀಸಲಾದ ಕೋಣೆಗಳಲ್ಲಿ ಕಂಡುಬಂದಿದೆ. ಕೋಟೆಯ ಉತ್ತರಾರ್ಧದಲ್ಲಿ ರಸ್ತೆಗಳ ಇಕ್ಕೆಲದಲ್ಲೂ ಅಚ್ಚುಕಟ್ಟಾಗಿ ಕಟ್ಟಿದ ದೊಡ್ಡ ಮನೆಗಳಿದ್ದುವು. ಇವು ಅಂದಿನ ಸಮಾಜದ ಪ್ರತಿಷ್ಠಿತರ ಗೃಹಗಳಾಗಿದ್ದಿರಬೇಕು

 ಕೆಳನಗರದ ಅಗಲ ಪೂರ್ವ-ಪಶ್ಚಿಮವಾಗಿ 230ಮೀ. ಇದರ ಉದ್ದ ಇನ್ನೂ ನಿಖರವಾಗಿ ಗೊತ್ತಿಲ್ಲ. ಇದರ ಸುತ್ತಲೂ ಒಂದು ಪೌಳಿ ಗೋಡೆಯಿತ್ತು. ಪೇಟೆಯ ಇಡೀ ಪ್ರದೇಶ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣವಾಗಿ ಹಬ್ಬಿ ಸಮಕೋನದಲ್ಲಿ ಸಂಧಿಸಿದ ಮುಖ್ಯರಸ್ತೆಗಳಿಂದ ಚದುರಂಗದ ಹಾಸಿನಂತೆ ಹಲವು ಚೌಕಿಗಳಾಗಿ ವಿಭಜಿತವಾಗಿದ್ದುವು. ಒಂದೊಂದು ಚೌಕದಲ್ಲೂ ಹಲವುಮನೆಗಳೂ ನಡುವೆ ಅನೇಕ ಉಪಬೀದಿಗಳೂ ಇದ್ದು ಒಟ್ಟು ನಗರದ ವಿನ್ಯಾಸ ಸುಂದರವಾಗಿತ್ತು. ಇಲ್ಲಿಯ ಹಾದಿಗಳ ಅಗಲ 1.80 ಮೀ. ಅಥವಾ ಅದರ ಗುಣಕಗಳು ಹರಪ್ಪ ಮತ್ತು ಮೊಹೆಂಜೋದಾರೋ ಪಟ್ಟಣಗಳಲ್ಲಿದ್ದಂತೆ, ಇಲ್ಲಿ ರಸ್ತೆಗಳಿಗೆ ಮೋರಿಗಳಿಲ್ಲದಿದ್ದುದು ಒಂದು ವಿಶೇಷ. ಆದರೆ ಮನೆಗಳಲ್ಲಿ ನಾಜೂಕಾಗಿ ಕಟ್ಟಲಾಗಿದ್ದ ಬಚ್ಚಲುಗಳಿಂದ ಕೊಳೆಚೆ ನೀರೆಲ್ಲ ಮನೆಯ ಹೊರಭಾಗದಲ್ಲಿಟ್ಟಿದ್ದ ದೊಡ್ಡ ಭಾಂಡಗಳಿಗೆ ಬೀಳುವಂತೆ ಮಾಡುವ ವ್ಯವಸ್ಥೆಯಿತ್ತು. ಇಲ್ಲಿಯ ಮನೆಗಳು ಆಯಾಕಾರದವು. ಅವು ಕನಿಷ್ಠ ಎರಡು ಬೀದಿಗಳಿಗೆ ಸೇರಿದಂತಿರುತ್ತಿದ್ದುವು. ಕೆಲವು ಕಡೆಗಳಲ್ಲಿ ಇಟ್ಟಿಗೆಯ ದೊಡ್ಡ ಮೆಟ್ಟಲುಗಳಿರುವುದರಿಂದ ಆ ಮನೆಗಳಿಗೆ ಮಹಡಿಗಳೂ ಇದ್ದಿರಬಹುದು. ಮನೆಯ ಮಧ್ಯದ ಅಂಗಳದ ಸುತ್ತ ಮೂರುಕಡೆ ಆರು ಅಥವಾ ಏಳು ಕೋಣೆಗಳಲ್ಲದೆ  ಒಂದು ಬಾವಿಯೂ ಇರುತ್ತಿತ್ತು. ಉಪಯೋಗ ದೃಷ್ಟಿಯಿಂದ ಇದು ವ್ಯವಸ್ಥಿತವಾಗಿತ್ತು. ಗೋಡೆಗಳಿಗೆ ಮಣ್ಣಿನ ಗೆಲಾವು ಮಾಡಲಾಗಿತ್ತು. ಕೆಲವೆಡೆ ನೆಲಕ್ಕೆ ಹಾಸಿದ್ದ ಚಿತ್ರಿತ ಹಂಚುಗಳು ಕಂಡುಬಂದಿವೆ. ಹರಪ್ಪ ಸಂಸ್ಕøತಿಯ ವೈಶಿಷ್ಟ್ಯಗಳಾದ ಉತ್ತಮವಾಗಿ ಚಿತ್ರಿತವಾದ ಮಡಕೆಗಳು, ಚರ್ಟ್‍ಕಲ್ಲಿನ ಚಕ್ಕೆ, ಚಾಕುಗಳು, ಅನೇಕ ರೀತಿಯ ಮಣಿಗಳು, ಸುಟ್ಟ ಮಣ್ಣಿನ ಆಟದ ಗಾಡಿಗಳು, ಹಕ್ಕಿ ಮತ್ತು ಪ್ರಾಣಿಗಳು ಬೊಂಬೆಗಳು, ಕಲ್ಲಿನ ಚೌಕಕಾರದ ತೂಕದ ಬಟ್ಟುಗಳು, ಚಿತ್ರ ಮತ್ತು ಲಿಪಿಯಿರುವ ಸುಂದರ ಶಿಲಾಮುದ್ರೆಗಳು ಮುಂತಾದವುಗಳು ಇಲ್ಲೂ ದೊರಕಿವೆ.

 ಕೋಟೆಯಿಂದ ಈಶಾನ್ಯಕ್ಕೆ 300 ಮೀ. ದೂರದಲ್ಲಿ ಶ್ಮಶಾನವಿತ್ತು. ಇಲ್ಲಿ ಮೂರು ರೀತಿಯ ಸಮಾಧಿಗಳು ಕಂಡುಬಂದಿವೆ. ಉತ್ತರ-ದಕ್ಷಿಣವಾಗಿ ತೋಡಿದ ಉದ್ದವಾದ ಹಳ್ಳದಲ್ಲಿ ಹೆಣದ ಮೇಲೆ   ಉತ್ತರಕ್ಕಿರುವಂತೆ ಇದ್ದು, ಅದರ ಸುತ್ತುಲೂ ಮಡಕೆಗಳನ್ನಿಟ್ಟಿದ್ದುದು ಸಾಮಾನ್ಯ. ಇನ್ನೆರಡು ರೀತಿಯ ಸಮಾಧಿಗಳಲ್ಲಿ ಶಾರೀರಿಕ ಅವಶೇಷಗಳೇನೂ ಇಲ್ಲ. ದುಂಡು ಅಥವಾ ಅಂಡಾಕಾರದ ಹಳ್ಳದಲ್ಲಿ ಮಧ್ಯೆ ಒಂದು ದೊಡ್ಡ ಭಾಂಡವನ್ನಿಟ್ಟು ಸುತ್ತಲೂ ಸಣ್ಣ ಮಡಕೆಗಳನ್ನು ಜೋಡಿಸಲಾಗಿರುವುದು ಒಂದು ರೀತಿ. ಇನ್ನೊಂದು ಬಗೆಯ ಸಮಾಧಿಯಲ್ಲಿ ಮಡಕೆಗಳಷ್ಟನ್ನೇ ಮೇಲಿನ ರೀತಿಯ ಹಳ್ಳಗಳಲ್ಲಿ ಪೇರಿಸಲಾಗಿದೆ. ಸಮಾಧಿಗಳಲ್ಲಿ ಇಟ್ಟಿರುವ ಮಡಕೆಗಳಲ್ಲಿ ಮೃತರಿಗಾಗಿ ಅರ್ಪಿಸಲಾಗಿದ್ದ ಆಹಾರ-ಪಾನೀಯಗಳಿದ್ದಿರಬೇಕು.

 ಕಾಲಿಬಂಗನ್ ಹರಪ್ಪ ಸಂಸ್ಕøತಿಯ ಪಟ್ಟಣ: ಕ್ರಿ. ಪೂ. ಸು. 2300ರಲ್ಲಿ ಹುಟ್ಟಿ ಕ್ರಿ. ಪೂ. ಸುಮಾರು 1800 ಹೊತ್ತಿಗೆ ನಶಿಸಿರಬೇಕೆಂದು ವೈಜಾÐನಿಕ ಆಧಾರಗಳಿಂದ ತಿಳಿದುಬಂದಿದೆ. ಈ ಪಟ್ಟಣದ ನಾಶಕ್ಕೆ ಕಾರಣ ಗೊತ್ತಿಲ್ಲ. ಪ್ರಾಯಶಃ ಸಮೀಪದ ನದಿ ಬತ್ತುತ್ತ ಬಂದು, ಸುತ್ತ ಪ್ರದೇಶದಲ್ಲಿ ಬೇಸಾಯ ಕಡಿಮೆಯಾಗಿ ನಗರದ ಆವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದಿದ್ದುದರಿಂದ, ಇಲ್ಲಿಯ ಜನ ಬೇರೆಡೆಗೆ ವಲಸೆ ಹೋಗಿರಬೇಕೆಂದು ಊಹಿಸಲಾಗಿದೆ.

(ಎಸ್.ಎನ್.)

 